Sunday, November 22, 2015

ಹುಡುಗಿ

ಹಸರ ಗಿಡದಾಗ ಅರಳಿದಾಂಗ
ಮಲ್ಲಗೀ ಮೊಗ್ಗು
ಏ ಹುಡುಗಿ, ನಿನ್ನ ಮೊಗದಾಗ
ಆ ನಗು.
ಆ ಹೂವಾ ಸುವಾಸಿನಿ ಆದರ
ನೀ ಸುಹಾಸಿನಿ
ನಿನ್ನ ನಗೀಗೆ ಸೋತು ನಾ
ಹುಚ್ಚ ಆಗೀನಿ.
ನನ್ನ ಮನಸಿನ ತುಂಬಾ ನೀನ ತುಂಬೀದಿ
ಧಾರವಾಡದ ಮಂಜಿನಂಗ
ನೆನಪ ಬಂದಾಗೆಲ್ಲ ಖುಷಿ ಕೊಡತೀ
ಧಾರವಾಡ ಫೇಡಾ ತಿಂದಂಗ.
ಪುಶ್-ಫುಲ್ ಟ್ರೇನಿನಂಗ ಜಗ್ಗತೀ ನೀ
ನನ್ನ ಮನಸ್ನ ಹಿಂದಕ-ಮುಂದಕ
ಹಿಂಗ ಆದ್ರ ಹೆಂಗ ಹೇಳ ಮುಂದ
ನನ್ನ ಬದುಕ.
ಬದಕ್ನಾಗ ಪೂರ್ತಿ ಬಂದರ ಬರುವಲ್ಲಿ ಬಿಟ್ಟರ ಬಿಡವಲ್ಲಿ
ನೀನೂ ಒಂಥರಾ ಜಿಟಿ-ಜಿಟಿ ಮಳಿಯಂಗ
ಮನಸ್ನಾಗ ಮಾತ್ರ ಅಲಗಾಡದಂಗ ನಿಂತಿ
ಯುನಿವರ್ಸಿಟಿ ಗಡಿಯಾರದ ಕಂಭದಂಗ.

Sunday, November 15, 2015

ಅವಳು ನನ್ನವಳು

ಮಲ್ಲೆಯ ಬಳ್ಳಿಯಲ್ಲ
ಅದು ಮುಂಗುರುಳು
ನಗು ಅವಳದೋ
ತಾವರೆಯ ಎಸಳು
ಮಾತಿಗೆ ಸಾಕು ಬರೀ ಕಣ್ಣೆ
ಮನಸು ಅವಳದು ಬೆಣ್ಣೆ
ನನ್ನದೆಯ ಗದ್ದುಗೆಯಲಿ
ಮುದ್ದಾಗಿ ಮಲಗಿಹಳು
ಅವಳು ನನ್ನವಳು, ಅವಳು ನನ್ನವಳು

ಮಳೆಯಲಿ-ಜೊತೆಯಲಿ

ಸುರಿಯೋ ಮಳೆಯಲಿ ನೆನೆಯುತ
ಬರುವೆಯಾ ಜೊತೆಯಲಿ
ಹನಿಗಳ ಸದ್ದಲಿ ಬೆರೆಯುತ
ಮಾತಾಡುವ ಬರೀ ಕಣ್ಣಲಿ
ಒಂಟಿ ಹಾದಿಲಿ ನಡೆಯುತ
ಬೆರೆಯುವ ತೋಳಲಿ
ತುಂಟ ಮನಸ್ಸನ್ನು ಬಿಚ್ಚುತಾ
ಒಂದಾಗುವ ಉಸಿರಲಿ






ತುಂಬಿದ ಕೊಡ

ತುಂಬಿದ ಕೊಡ ತುಳುಕುವುದಿಲ್ಲ
ಎಂದು ಬಲ್ಲರು ಎಲ್ಲ
ಕೊಡ ಹೊತ್ತ ತುಂಬಿದ ಬಾಲೆ
ಬಳುಕುವುದ ನೋಡಿ
ಮನ ಸೋಲದವರಿಲ್ಲ

ಮಿಂಚಿನ ಬಳ್ಳಿ

ಮಿಂಚಿನ ಬಳ್ಳಿಯ
ಮುಖವ್ಯಾಕ ಬಾಡ್ಯದ
ಕಣ್ಣಡಿಯಲಿ ಕಪ್ಪು ಬಂದದ
ಮೊದಲಿದ್ದ ಮಿಂಚು ಮಾಯ ಆಗ್ಯದ
ಆಸೆಗಳು ತುಂಬಿದ್ದ ಕಣ್ಣಾಗ
ಈಗ ಕಣ್ಣೀರ ಬರೇ ತುಂಬ್ಯದ
ಯಾವಾಗಲೂ ನಗತಿದ್ದ ತುಟಿ
ಬಿಗಿದು ಬಿರಕಾಗ್ಯದ
ಒಲ್ಲದ ಬಾಸಿಂಗ, ಸಲ್ಲದ ಮದ್ವಿ
ಬ್ಯಾಡ ಬ್ಯಾಡ ಅಂದ್ರು ಬಂದು ಅಪ್ಯದ
ಮನ್ದಾಗಿನ ಗೆಳಿಯಾ ದೂರ ಆಗ್ಯಾನ
ಮನಸಿನ ಕನ್ನಡಿ ಒಡೆದು
ಚೂರು ಚೂರಾಗ್ಯದ





Friday, October 16, 2015

ಬಾಳಜ್ಜ

ಬಾರದ ಊರಿಗೆ ಹೋದನಾತ
ಮರಳಿ ಬರುವನೇ ಬಾಳಜ್ಜ ?
ಎಲೆ-ಅಡಿಕೆಯ ಚೀಲ ಉಳಿದಿದೆ ಇಲ್ಲೇ
ಇನ್ನೂ ಯಾಕೆ ಬರಲಿಲ್ಲ ?
ನಗುತ ನಲಿಸುತ ಇಲ್ಲಿಯೇ ಇದ್ದ
ಈಗೂ ಇಲ್ಲಿಯೇ ಇರುವನೇನೋ ಎಂಬ ಭಾವ
ಬಾರನು ಮರಳಿ ಎಂದು ಗೊತ್ತಿದ್ದೂ
ಕೇಳುತಿಲ್ಲ ಮನಸು ಬಯಸುತಿದೆ ಅವನ, ಈ ಜೀವ

ಝುಮುಕಿ

ಅದೇನು ಹೇಳಲಿ
ನಿನ್ನ ಕಿವಿಯ ಝುಮುಕಿಯ
ತುಂಟಾಟವ
ಗಾಳಿಯ ನೆಪವೊಡ್ಡಿ
ನಿನ್ನ ಕೆನ್ನೆಯ ಚುಂಬಿಸುತ್ತಿದೆ ಪದೆ ಪದೆ
ನನ್ನ ಹೊಟ್ಟೆಯ ಉರಿಸಲೆಂದೇ..

ಆಸೆ

ಮಾವಿನ ಕೊಂಬೆಯ ತುದಿಯ ಚಿಗುರು
ನಾನಾಗ ಬೇಕು ಓ ದೇವರೆ
ವಸಂತೆಯೊಡನೆ ಮಾತನಾಡಬೇಕಿದೆ
ಮುಂಜಾನೆ ಮುಸುಕುವ ಮಂಜಿನ ಹನಿಯು
ನಾನಾಗ ಬೇಕು ಓ ದೇವರೆ
ಎಲ್ಲ ಹೂಗಳನ್ನೂ ಚುಂಬಿಸಬೇಕಿದೆ
ಮೋಡದ ಮಡಿಲಿನ ನೀರಿನತೊಟ್ಟು
ನಾನಾಗ ಬೇಕು ಓ ದೇವರೆ
ಭೂಸಿರಿಯನ್ನು ತೊಯ್ಯಿಸ್ಸಿ ತಬ್ಬಬೇಕಿದೆ
ಕಪ್ಪೆಚಿಪ್ಪಲ್ಲಿ ಅಡಗಿದ ಹನಿಮುತ್ತು
ನಾನಾಗ ಬೇಕು ಓ ದೇವರೆ
ಅವಳ ಕೊರಳನ್ನು ಅಪ್ಪಬೇಕಿದೆ

ಹೀಗೇಕೆ

ತಾವು ಮಾಡಲಾಗದ
ಮಾಡಲು ಪ್ರಯತ್ನವೇ ಪಡದ ಆ ಕಾರ್ಯವ
ಧೃಡವಾದ ಛಲದೀ, ಅವಿರತ ಶ್ರಮದೀ ಸಾಧಿಸುವವನಿಗೆ
ಬೆನ್ನುಚಪ್ಪರಿಸಿ ಹುರಿದುಂಬಿಸುವ ಬದಲು
ಕೊಂಕು ಮಾತಾಡಿ ಕಾಲೇಳೆಯುವರಲ್ಲ
ಈ ಜನ ಹೀಗೇಕೆ ???

ಸಾಬೂನು

ಹೊಳೆವ ನಿನ್ನ ಬಿಳಿಯ ವದನ ಕಂಡು
ಯೋಚಿಸುತ್ತಿದ್ದೆ ದಿನಾನೂ
ಓ ಚೆಲುವೆ ನಾನಾಗಬಾರದಿತ್ತೇ
ಸಾಬೂನು

ದಸರಾ

ಹಿಂದೊಮ್ಮೆ ಇತ್ತು ದಸರಾ
ಭವ್ಯ ಪರಂಪರೆಯ
ಆಚಾರ ವಿಚಾರ
ರಾಜಕೀಯದಾಟಕ್ಕೆ ಸಿಕ್ಕಿ
ಈಗಾಗಿದೆ ಬರೀ ಕಾಟಾಚಾರ

ಸುನಾಮಿ

ಸಾಗರದ ಅಲೆಗಳ ಏರಿಬಂದ
ಸಾವಿನ ಸರದಾರ
ಸಾವಿರ ಜನಗಳ ತುಂಬಿದ ಬದುಕಿಗೆ
ತಂದ ಸಂಚಕಾರ
ದೈತ್ಯ! ನಿನ್ನ ಅಟ್ಟಹಾಸಕ್ಕೆ ಸಿಕ್ಕಿ
ಕೊಚ್ಚಿದವೆಷ್ಟೋ ಆಸ್ತಿ-ಪಾಸ್ತಿ
ಸಿಗಲೇ ಇಲ್ಲ ಕೊನೆಗೂ
ಬಲಿಯಾದವರ ಅಸ್ತಿ
ಹೊಟ್ಟೆಯಕೂಸು ಕೈಬಿಟ್ಟುಹೋದ
ತಾಯಿಯ ದುಃಖದ ಕಂಬನ
ನೀ ಕೊಂದ ತಾಯಿಗಾಗಿ
ಆ ಕಂದನ ಹಂಬಲನ
ಬಂಧು-ಬಳಗ ಕಳೆದು ಕೊಂಡವರ
ಮುಗಿಲು ಮುಟ್ಟುವ ಆಕ್ರಂದನ
ಚುರ್ರೆನಿಸುವುದು ಕರುಳು
ತುಂಬಿಬರುವುದು ನಯನ
ಸುಂದರ ಬದುಕುಗಳ ಕೊಚ್ಚಿ
ಮಾಡಿದೇ ನೀ ಬೇನಾಮಿ
ಬರೀ ಅಲೆಯಲ್ಲ ಮೃತ್ಯುಬಲೆ
ಮಹಾಮಾರಿ ನೀ ಸುನಾಮಿ

ಗೆಳೆತನ

ಆ ಹೂವು ಹೂವಲ್ಲ
ಪರಿಮಳವಿಲ್ಲದ ಮೇಲೆ
ಜೀವನವೊಂದು ಜೀವನವಲ್ಲ
ಗೆಳೆತನವಿಲ್ಲದ ಮೇಲೆ

ಮೂರು

ತಾಯಿಯ ಮಮತೆಯ ಮಡಿಲು
ಗೆಳೆಯನ ನೇಹದ ಹೆಗಲು
ಪ್ರಿಯತಮೆಯ ಪ್ರೇಮದ ತೋಳು
ಬೇಕು ಜೀವನದಲಿ ಈ ಮೂರು
ಮನದ ದುಗುಡ ಕಳೆಯಲು

ಚಳಿ

ಚಳಿಗಾಲದ ಚಳಿಯನ್ನು ಕಳೆಯಲು
ತುಪ್ಪಳದ ಕಂಬಳಿಯೇಕೆ ಬೇಕು ನಲ್ಲೆ
ನಿನ್ನ ಬೆಚ್ಚನೇ ಆಲಿಂಗನದ ಸವಿನೆನಪು ಸಾಕು

Thursday, October 15, 2015

ನೀನು

ನನ್ನ ಜೀವವೀಣೆಯ
ನಾದತಂತಿ ನೀನೆ
ನನ್ನ ಮನದ ರಾಗಕೆ
ತಾಳ ನೀನೆ
ನನ್ನ ಬಾಳ ಬೆಳದಿಂಗಳ
ತಿಂಗಳ ನೀನೆ
ಪ್ರೀತಿ ಬೆಳಕು ತೋರಿದ
ಕಂಗಳು ನೀನೆ
ನನ್ನ ಕವನಗಳಿಗೆಲ್ಲ
ನೀನೆ ಅಲ್ಲವೇ ಭಾಷೆ
ಸದಾ ನಿನ್ನ ತೋಳುಗಳಲಿ
ಉಳಿದು ಬಿಡುವಾಸೆ
ಬೇರೇನೂ ಬಯಸದೀ ಜೀವ
ನನ್ನಾಸೆಯ ಹೂವೇ
ಖುಷಿಯಿಂದ ತುಂಬಿರಲಿ ಸದಾ
ನಿನ್ನಯಾ ಬಾಳುವೆ

ಅರಸಿ



ವರುಷ ನಾಲ್ಕಾದವು ಇಂದಿಗೆ
ನಾನವಳನ್ನು ವರಸಿ
ಅಂದಿಗು, ಇಂದಿಗು ಅವಳು
ನನ್ನೆದೆಯ ಅರಸಿ
ವರುಷ ನೂರಾಗಲಿ
ಹೀಗೆಯೆ ಇರಲಿ ಈ ಖುಷಿ
ಬೇಡುವೆವು ತಲೆಬಾಗಿ ದೇವತೆಗಳೆ
ನಮ್ಮನ್ನು ಹರಸಿ

Monday, October 12, 2015

ನೀನಿಲ್ಲದ ದಿನಗಳು

ನೀನಿಲ್ಲದ ದಿನಗಳು
ಅರೆಬೆಂದ ಅಗುಳುಗಳು
ನನ್ನನ್ನು ಕಾಡುತಿವೆ
ನಿದ್ರೆ ಇಲ್ಲದ ರಾತ್ರಿಗಳು
ಸಾಗರದ ಆ ತುದಿಯಲಿ
ಕುಳಿತಿರುವೆ ನೀನು
ಇಲ್ಲಿ ನಾನು
ನೀರಿಲ್ಲದ ಮೀನು..

ಸಾವು

ಜನ ಹೇಳುತ್ತಿದ್ದಾರೆ
ನಿನ್ನ ಕೊರಗಲೇ ನಾನು ಸತ್ತೆ! ಎಂದು
ಇವರಿಗೇಕೆ ಅರ್ಥವಾಗುವುದಿಲ್ಲ
ನಾನು ಇನ್ನೂ ನಿನಗಾಗಿ ಕಾಯುವೆ ಎಂದು.
ಎಂದಿಲ್ಲದ ಇವತ್ತು ನನಗೆ ಸ್ನಾನ
ಹೊಸ ಉಡುಗೆ, ಶೃಂಗಾರ
ಹೂಮಾಲೆಗಳ ರಾಶಿ ಬೇರೆ!
ಎಲ್ಲರೂ ಸೇರಿದ್ದಾರೆ ಇಲ್ಲೇ
ಪೊರೆದವರು, ಹಳಿದವರು.
ಇನ್ನುಮುಂದೆ ಇದೇ ನನ್ನ ಜಾಗ
ಮೂರಡಿ, ಆರಡಿ, ಊರಹೊರಗೆ
ಇದೇಸರಿ! ಇಲ್ಲಿ ಯಾರದೂ ಕಾಟವಿಲ್ಲ
ನಾನು ಮತ್ತು ನಿನ್ನ ನೆನಪು ಮಾತ್ರ.
ಕಾದು ಕಾದು ಹಣ್ಣಾಯಿತು
ಅದಕ್ಕೆ ಮಣ್ಣಾಯಿತು ದೇಹ
ಜೀವವಿಲ್ಲದಿರೇನಾಯಿತು
ಇನ್ನೂ ಕಾಯುತಿದೆ ಹೃದಯ,
ನಿನಗಾಗಿ ಇನ್ನೂ ಕಾಯುತಿದೆ ಹೃದಯ.

ಕಲಾಮ್

ಕಲಾಮ್ 

ಓ ಕಲಾಮ್
ನಿಮಗೆ ಸಲಾಮ್
ಸಾಧನೆ ಹಾದಿಯಲಿ
ಶ್ರಮಿಸುವ ಯುವಜನತೆಗೆ
ನೀವಾದಿರಿ ಸ್ಫೂರ್ತಿಯ ಮಲಾಮ್

ನೆನಪು

ನೆನಪು
ಮಳೆ ಬಂದು ನಿಂತಾಗ
ನನ್ನೆದೆಯು ತೊಯ್ದಾಗ
ತಂಗಾಳಿ ಬೀಸಿ ಬಂತು
ಮುಚ್ಚಿ ಮಲಗಿದ್ದ ಭಾವನೆ
ಗರಿಗೆದರಿ ನಿಂತು
ನಿನ್ನಯ ನೆನಪನು ಹೊತ್ತು ತಂತು
ಮೈ ನಡುಕವಿದ್ದರೂ
ಮನ ಮಾತ್ರ ಬೆಚ್ಚಗಿತ್ತು
ಅದರುತಿದ್ದರು ಅಧರ
ತಿಳಿನಗೆಯ ಬೀರಿತ್ತು
ಮೊದಲ ಸ್ಪರ್ಶದ ಆ ನೆನಪು
ಮನದಲಿ ಪುಳಕ ತಂತು
ರಂಗೇರಿದ ಸಂಜೆಯಲಿ
ಕಣ್ಣಿಗೆ ಮಂಜು ಕವಿದಿತ್ತು
ಮೈತನ್ನ ಇರುವನ್ನೆ ಮರೆತಿತ್ತು
ಕಿವಿಯಲಿ ನಿನ್ನದೇ ದನಿಯ ಗುಂಜನವಿತ್ತು
ತಂಗಾಳಿ ನಿನ್ನಯ ನೆನಪನು
ಹೊತ್ತು ತಂತು
ನನ್ನಲಿ ಹೊಸ ಹುರುಪು
ಉಕ್ಕಿ ಬಂತು

Saturday, October 10, 2015

ಇವನು

ಇವನು

ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು
ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು
ತಲೆ ಬುಡ ಏನೂ ತಿಳಿಯದು
ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.
ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ
ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ
ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು,
ಏನೇನೋ ಕನಸುಗಳು, ವಾಸ್ತವದ ಜೊತೆಗೆ ಕಾದುವ, ಸೋಲುವ, ಗೆಲ್ಲುವ, ಗೆದ್ದೂ ಸೋಲುವ ಬಯಕೆಗಳು.
ಹುಚ್ಚು ಕುದುರೆಯ ಮೇಲೇಯೇ ಸವಾರಿ  
ಪ್ರತಿ ಹೆಜ್ಜೆಗೂ ನೂರಾರು ಹೊಸ ದಾರಿ
ಯಾವುದು ತಪ್ಪು, ಯಾವುದು ಸರಿ
ಅಷ್ಟಕ್ಕೂ ಸಾಧುವೆ ಇವನ ಗುರಿ?
ಸದಾ ಮುಂದಿನದ್ದೇ ಚಿಂತೆ, ಋಣಗಣದ್ದೇ ಕಾರು-ಬಾರು
ನಡು ನಡುವೆ ಧನಶೇಷದ ಮಿಣುಕು, ಸ್ಫೂರ್ತಿ, ಆಸರೆ
ಒಮ್ಮೆಲೆ ಆವರಿಸುವ ವ್ಯಾಮೋಹ,  ಕರಿಮೋಡದಂತೆ
ಕೆಲವೊಮ್ಮೆ ನಿರಾಳ, ಗಾಳಿಯಲಿ ತೇಲುವ ಅರಳೆಯಂತೆ
ಏರೇ ಬಿಡುವನೊಮ್ಮೆ ಹೆಮ್ಮೆಯ ಮೇರು ಗಿರಿ
ಕಾಲೆಳೆದಾಗ ಹಳ-ಹಳಿಯ ಪ್ರಪಾತ.
ನಿರಾಸೆಯ ಕಾಲುವೆಯಲಿ ಮೊಣಕಾಲಷ್ಟು ನೀರಿದ್ದರೂ ದಾಟಲಂತು ಸಾಕು-ಸಾಕು
ಮುಂದೆ ಮಗಧಾದ ಹೊಳೆಯೇ ಇದೆ ಈಸಿ ದಡವ ಸೇರಬೇಕು
ನಂಬ ಬಹುದೇ ಇವನ? ಇವನ ಸಾಮರ್ಥ್ಯವ?
ಅರಿಯ ಬಲ್ಲೆನೇ ನಾನು ಎಂದಾದರು ಇವನ ಆಳ-ವಿಸ್ತಾರವ
ಗೊತ್ತಿಲ್ಲ ಎಷ್ಟುದಿನ ಈ ಪ್ರಯತ್ನ, ಬಹುಶಃ ನನ್ನ ಕೊನೆಯವರಿಗೆ
ಅಥವಾ ಇವನು ಜೊತೆ ಇರುವರೆಗೆ...